ಮುಕ್ತಾಯಕ್ಕ
	12ನೆಯ ಶತಮಾನದ ಶಿವಶರಣಿ ಹಾಗೂ ವಚನಕಾರ್ತಿ, ಮುಕ್ತಾಯಿ ಎಂಬ ಹೆಸರಾಗಿದ್ದ ಈಕೆ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಮುಖ್ಯಳಾದವಳು ಗದಗ ತಾಲ್ಲೂಕಿನ ಲಕ್ಕುಂಡಿ ಈಕೆಯ ಜನ್ಮಸ್ಥಳ. ಒಕ್ಕಲು ಮನೆತನದಲ್ಲಿ ಹುಟ್ಟಿದವಳು. ಇವಳ ತಂದೆ ತಾಯಿಗಳ ವಿಚಾರ ತಿಳಿದಿಲ್ಲ. ಇವಳಿಗೆ ಮದುವೆ ಆಗಿತ್ತೆಂಬ ವಿಚಾರ ಸೂಚಿತವಾಗಿದ್ದರೂ ಗಂಡ ಯಾರೆಂಬುದು ತಿಳಿದುಬಂದಿಲ್ಲ. ಇವಳ ಅಣ್ಣ ಅಜಗಣ್ಣ. ಈತ ಇವಳ ಆಧ್ಯಾತ್ಮಿಕ ಗುರುವೂ ಆಗಿದ್ದು ಇವರ ಸಂಬಂಧ ಗುರು ಶಿಷ್ಯ ಸಂಬಂಧವಾಗಿದ್ದಿತು. ಮುಕ್ತಾಯಕ್ಕ ಮದುವೆಯಾದ ಮೇಲೆ ಮಸಳಿಕಲ್ಲಿನಲ್ಲಿದ್ದ ಗಂಡನ ಮನೆಗೆ ಹೋಗಬೇಕಾಯಿತು. ಆಗ ತನ್ನ ಗುರುವಾದ ಅಣ್ಣನನ್ನು ಅಗಲಿರಲಾರದ ನೋವಿನಿಂದ ಅವನ ಯೋಗಕ್ಷೇಮದ ಬಗ್ಗೆ ಕಾತರಳಾಗಿದ್ದುದರಿಂದ ಒಂದು ಪಕ್ಷ ಅವನಿಗೆ ಆಗಬಾರದುದೇನಾದರೂ ಆದರೆ ಅದನ್ನು ತಿಳಿದುಕೊಳ್ಳುವ ಕುರುಹನ್ನು ತಿಳಿಸಬೇಕೆಂದು ಅಣ್ಣನನ್ನು ಕೇಳಿದಳು. ಉಟ್ಟಸೀರೆಯ ನಿರಿಕೆಕಳಚಿ. ಮುಡಿಗೆಟ್ಟು ಬಿಚ್ಚಿ ಕೆದರಿ ಕಡೆಯುವ ಮೊಸರು ಕಲ್ಲಾದಾಗ ನಾನು ಶಿವೈಕ್ಯನಾದೆನೆಂದು ತಿಳಿದುಕೋ ಎಂದು ಅಜಗಣ್ಣ ತನ್ನ ಸಾವನ್ನು ಸೂಚಿಸುವ ಮೂರು ಕುರುಹುಗಳನ್ನು ತಿಳಿಸಿದ. ಅಣ್ಣನನ್ನು ಆಗಲಿ ಹೋದರೂ ಅವನ ನೆನಪು ಸದಾ ಇವಳಲ್ಲಿ ಹಸುರಾಗಿತ್ತು. ಹೀಗೆ ಸ್ವಲ್ಪ ಕಾಲ ಕಳೆದ ಅನಂತರ ಒಂದು ದಿನ ಅಜಗಣ್ಣ ತಲೆಬಾಗಿಲಿಗೆ ಶಿರಸ್ಸು ತಾಗಿ ಲಿಂಗೈಕ್ಯನಾದ ಇತ್ತ ಇವಳಿಗೆ ತನ್ನ ಅಣ್ಣ ಹೇಳಿದ್ದ ಮೂರು ಕುರುಹುಗಳು ಕಾಣಿಸಿಕೊಂಡು ಅವನು ಲಿಂಗೈಕ್ಯನಾದುದು ತಿಳಿದು ಅಪಾರ ದುಃಖಪಟ್ಟಳು. ಆಗ ಪ್ರಭುದೇವ ಬಂದು ಅವಳ ಬಗ್ಗೆ ಮರುಕಗೊಂಡು ಸಂತೈಸಿ ಶಿವಯೋಗದ ರಹಸ್ಯವನ್ನು ತಿಳಿಸಿ ಇವಳ ದಃಖವನ್ನು ದೊರೆ ಮಾಡಿದ. ದೀರ್ಘಕಾಲದ ಚರ್ಚೆಯಿಂದ ಮುಕ್ತಾಯಿಯ ಭ್ರಮೆಗಳು ದೂರವಾದವು. ಅನಂತರ ಈಕೆ ಶಬ್ದಮುಗ್ಧಳಾಗಿ ಬಯಲಾದಳು.

	ಈಕೆ ಅಜಗಣ್ಣ ಎಂಬ ಅಂಕಿತವನ್ನಿಟ್ಟುಕೊಂಡು ವಚನಗಳನ್ನು ರಚಿಸಿದ್ದಾಳೆ. ಇದುವರೆಗೆ ಮೂವತ್ತೇಳು ವಚನಗಳು ದೊರೆತಿವೆ. ಬಸವಣ್ಣ, ಚೆನ್ನಬಸವಣ್ಣ, ಮರಳ ಶಂಕರದೇವ. ಅಜಗಣ್ಣ ಮತ್ತು ಅಲ್ಲಮಪ್ರಭು ಮೊದಲಾದವರು ಇವಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ ವಿಚಾರ ಇವಳ ವಚನಗಳಿಂದಲೇ ತಿಳಿದುಬರುತ್ತದೆ. ಈಕೆಯ ಹೆಸರಿನೊಂದಿಗೆ ಗೌರವಾರ್ಥದ ಅಕ್ಕ ಶಬ್ದ ಸೇರಿದ್ದು ಇವಳು ತನ್ನ ಸಮಾಜದಿಂದ ಪಡೆದಿದ್ದ ಹೃತ್ಪೂರ್ವಕ ಗೌರವಕ್ಕೆ ಸಾಕ್ಷಿಯಾಗಿದೆ. ಅಕ್ಕಮಹಾದೇವಿಯ ಅನಂತರ ಈಕೆ ಸಾಹಿತ್ಯಕ ಹಾಗೂ ಆಧ್ಯಾತ್ಮಿಕ ಸಿದ್ಧಿಗಳೆರಡರಿಂದಲೂ ವಿಶೇಷವಾಗಿ ಗಮನ ಸೆಳೆದು ವ್ಯಕ್ತಿಯಾಗಿದ್ದಾಳೆ.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ